ಕಲಾ ೧ : ಲಲಿತಕಲೆಗಳಿಗೆ ಮೀಸಲಾಗಿದ್ದ ಕನ್ನಡ ಪತ್ರಿಕೆ. ೧೯೩೦ ಮಾರ್ಚ್ ತಿಂಗಳಿನಲ್ಲಿ ಆರಂಭವಾಗಿ ಸು. ೪ ವರ್ಷಗಳ ಕಾಲ ನಡೆಯಿತು. ಸಂಪಾದಕರು ಎ. ಎನ್. (ಅ. ನ.) ಸುಬ್ಬರಾವ್. 
‘ಕಲೆಯ ಖನಿಯಂತಿದ್ದ ಕರ್ನಾಟಕದಲ್ಲಿ ಕಲೆಗಳು ಗಳಿತಾವಸ್ಥೆಯಲ್ಲಿದ್ದು, ತಕ್ಕ ವ್ಯವಸಾಯವಿಲ್ಲದೆ ಸೊರಗುತ್ತಿವೆ....ಜನಸಾಮಾನ್ಯರಲ್ಲಿ ಕಲಾಭಿಮಾನವೂ ಉದ್ಯೋಗ ತತ್ಪರತೆಯೂ ಅಳಿಸಿಹೋಗಿರುವುದು.....ಇಂಥ ಪರಿಸ್ಥಿತಿಯಿಂದ ಪಾರಾಗಿ ಕರ್ನಾಟಕದ ಕೀರ್ತಿಯನ್ನುಳಿಸಲು ವಿದ್ಯಾವಂತರೂ ಕಲಾಭಿಮಾನಿಗಳೂ ನಡೆಸಬೇಕಾದ ಕಾರ್ಯಗಳು ಅನೇಕವಿವೆ’-ಎಂಬ ಅಂಶವನ್ನು ಮನಗಂಡ ಸಂಪಾದಕರು, ಈ ಭಾಗದಲ್ಲಿ ‘ಅಳಿಲು ಭಕ್ತಿ, ಮಳಲು ಸೇವೆ’ ಮಾಡಲು ಉದ್ದೇಶಿಸಿ ಈ ಪತ್ರಿಕೆಯನ್ನು ಸ್ಥಾಪಿಸಿದರು.
ಪತ್ರಿಕೆಯನ್ನು ವಿದ್ಯಾ, ಲಲಿತಕಲೆ, ರಂಗಭೂಮಿ ಮತ್ತು ಕುಶಲ ವಿದ್ಯೆಗಳ ಮಾಸಪತ್ರಿಕೆ ಎಂದು ವಿವರಿಸಲಾಗಿತ್ತಾದರೂ ಇದರ ಒಲವು ಪ್ರಧಾನವಾಗಿ ಚಿತ್ರಕಲೆಯ ಕಡೆಗೆ ಇತ್ತು. ಕತೆ ಕವನಗಳೂ ಕಲಾವಿಮರ್ಶೆ ಮತ್ತು ವಿವಿಧ ಕಲೆಗಳನ್ನು ಕುರಿತ ವಿವರಣಾತ್ಮಕ ಲೇಖನಗಳೂ ಇದರಲ್ಲಿ ಪ್ರಕಟವಾಗುತ್ತಿದ್ದವು. ದೇವುಡು ನರಸಿಂಹಶಾಸ್ತ್ರೀ, ಮೋಟಗಾನಹಳ್ಳಿ ಸುಬ್ರಹ್ಮಣ್ಯಶಾಸ್ತ್ರೀ, ಬೆಳ್ಳಾವೆ ನರಹರಿಶಾಸ್ತ್ರೀ, ಆಸ್ಥಾನ ವಿದ್ವಾನ್ ಜಯರಾಮ ವೆಂಕಟಾಚಾರ್ಯ, ಶಿವರಾಮ ಕಾರಂತ, ಅ. ನ.ಕೃಷ್ಣರಾಯ, ವಿ. ಕೆ.ಗೋಕಾಕ್, ತಿ.ತಾ. ಶರ್ಮ ಮುಂತಾದ ವಿದ್ವಾಂಸರು ಈ ಪತ್ರಿಕೆಯ ಲೇಖಕ ಬಳಗಕ್ಕೆ ಸೇರಿದ್ದರು.	(ಎಂ.ಎನ್.ಸಿ.ಎಚ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ